karnatakarajyadevangasanghajobs.com

Welcome to
Karnataka Rajya Devanga Sangha
Job Portal

Be a proud member of Karnataka Rajya Devanga Sangha by enrolling yourself

ಕರ್ನಾಟಕ ರಾಜ್ಯ ದೇವಾಂಗ ಸಂಘ

ಪುರಾಣದ ಪ್ರಕಾರ ದೇವತೆಗಳ ಮತ್ತು ಮಾನವರ ಮಾನ ಮುಚ್ಚಲು ಬಟ್ಟೆಯನ್ನು ತಯಾರಿಸುವ ಸಲುವಾಗಿ ಶಿವನ ಅಂಶದಿಂದ ಜನಿಸಿದ ದೇವಲ ಮಹರ್ಷಿಯು ನಮ್ಮ ಸಮುದಾಯದ ಮೂಲಪುರುಷರಾಗಿದ್ದಾರೆ. ದೇವರ ಅಂಗದಿಂದ ಜನ್ಮ ತಳೆದಿದ್ದರಿಂದ ದೇವಾಂಗರೆಂದು ಕರೆಯಲ್ಪಟ್ಟರು. ಇವರ ಸಪ್ತಾವತಾರಗಳಲ್ಲಿ ಏಳನೇ ಅವತಾರವೇ ನಮ್ಮ ದೇವಾಂಗ ಸಮಾಜದ ಆಧ್ಯ ವಚನಕಾರರೆಂದೇ ಪ್ರಸಿದ್ಧರಾಗಿರುವ ಶ್ರೀ ದೇವರ ದಾಸಿಮಯ್ಯನವರು ಎಂದು ದೇವಾಂಗ ಪುರಾಣದಲ್ಲಿ ಉಲ್ಲೇಖವಿದೆ. ಇವರ ಹುಟ್ಟೂರು ಕರ್ನಾಟಕದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮ, ದೇವಾಂಗ ಸಮಾಜದ ನಾವೆಲ್ಲರೂ ಶಕ್ತಿ ದೇವತೆಗಳ ಆರಾಧಕರಾಗಿದ್ದು, ಜಗನ್ಮಾತೆ ಶ್ರೀ ಬನಶಂಕರಿ ದೇವಿ, ಶ್ರೀ ರಾಮಲಿಂಗ ಚೌಡೇಶ್ವರಿ ನಮ್ಮ ಕುಲದೇವತೆಗಳಾಗಿವೆ.

ಕರ್ನಾಟಕ ರಾಜ್ಯದಲ್ಲಿ ದೇವಾಂಗ ಸಮಾಜದ ಜನಸಂಖ್ಯೆ ಸುಮಾರು 40-45 ಲಕ್ಷದಷ್ಟಿದ್ದು. ನೇಕಾರಿಕೆಯು ನಮ್ಮ ಕುಲಕಸುಬಾಗಿದೆ. ದೇವಾಂಗ ಸಮಾಜದ ಮೂಲ ಗುರುಪೀಠವು ಹಂಪಿಯ ಹೇಮಕೂಟದಲ್ಲಿರುವ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನವಾಗಿದ್ದು, ಈ ಸ್ಥಳವನ್ನು ವಿಜಯನಗರ ಸಾಮ್ರಾಜ್ಯದ ಅರಸರು ನಮ್ಮ ಸಮುದಾಯಕ್ಕೆ ಬಳುವಳಿಯಾಗಿ ನೀಡಿದ ಸ್ಥಳವಾಗಿದೆ. ಇದರ ಶಾಖಾಮಠಗಳು ಬೆಂಗಳೂರಿನ ನೆಲಮಂಗಲ ತಾಲ್ಲೂಕು ಕೆಂಪಲಿಂಗನಹಳ್ಳಿಯಲ್ಲಿ ಮತ್ತು ಬಾದಾಮಿಯ ಶ್ರೀಕ್ಷೇತ್ರ ಬನಶಂಕರಿಯಲ್ಲಿದೆ. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರು ಈಗಿನ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಮ್ಮ ಕರ್ನಾಟಕ ರಾಜ್ಯ ದೇವಾಂಗ ಸಂಘವು 2005ರಲ್ಲಿ ಸ್ಥಾಪನೆಗೊಂಡಿದ್ದು ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀಯುತ ಎಂ.ಡಿ. ಲಕ್ಷ್ಮೀನಾರಾಯಣರವರು, ನಂತರ ಶ್ರೀಯುತ ಡಾ. ಜಿ. ರಮೇಶ್‌ರವರು ಹಾಗೂ ಹಾಲಿ ಶ್ರೀಯುತ ರವೀಂದ್ರ ಕಲಬುರ್ಗಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ದೇವಾಂಗ ಸಂಘವು ನಮ್ಮ ಸಮಾಜದ ಸಂಘಟನೆಯನ್ನು ಸಧೃಡವಾಗಿ ನಡೆಸಿಕೊಂಡು ಬರುತ್ತಿದ್ದು ವಿದ್ಯಾನಿಧಿ, ಸಂಘದ ಸದಸ್ಯತ್ವ, ಜಿಲ್ಲಾ ಸಂಘ, ತಾಲ್ಲೂಕು ಸಂಘಗಳ ರಚನೆ ಇನ್ನೂ ಅನೇಕ ಇತರೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಂಘವು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ನಮ್ಮ ಸಮಾಜದ ಬಂಧುಗಳು ತುಂಬಾ ಸ್ವಾಭಿಮಾನದ ಜೀವನ ನಡೆಸಲು ಬಯಸುತ್ತಾರೆ.

ರಾಜ್ಯದಲ್ಲಿ ದೇವಾಂಗ ಸಮಾಜದ ನಿರುದ್ಯೋಗ ಯುವಕ-ಯುವತಿಯರು ಸಾಕಷ್ಟು ಜನರಿದ್ದು, ಅವರಿಗೆ ಸರ್ಕಾರಿ, ಅರ ಸರ್ಕಾರಿ, ಖಾಸಗಿ ಕಂಪನಿಗಳಲ್ಲಿರುವ ಉದ್ಯೋಗದ ಸಮಗ್ರ ಮಹಿತಿಗಳನ್ನು ನೀಡುವ ಸದುದ್ದೇಶದಿಂದ ಉದ್ಯೋಗ ಮಾಹಿತಿಯ ಒಂದು ವೆಬ್ ಸೈಟ್ (ಜಾಬ್ ಪೋರ್ಟಲ್) ಅನ್ನು ಪ್ರಾರಂಭಿಸಲಾಗಿದ್ದು, ಇದರ ಸಂಪೂರ್ಣ ಉಪಯೋಗವನ್ನು ನಮ್ಮ ಸಮಾಜದ ಯುವಕ ಯುವತಿಯರು ಪಡೆದುಕೊಳ್ಳಬೇಕೆಂಬ ಇಚ್ಛೆಯು ಕರ್ನಾಟಕ ರಾಜ್ಯ ದೇವಾಂಗ ಸಂಘದ್ದಾಗಿರುತ್ತದೆ.